Sunday, 1 December 2019

ದುಷ್ಟತನಕ್ಕೆ ಕೊನೆ ಯಾವಾಗ?

ಮೊನ್ನೆ ಡಾ.ಪ್ರಿಯಾಂಕ ರೆಡ್ಡಿಯವರ ಮೇಲೆ ನಡೆದ ಅತ್ಯಾಚಾರದ ಸುದ್ದಿ ಓದಿ ತುಂಬಾ ನೋವು ಉಂಟಾಯಿತು.ಕಣ್ಣೀರು ಬಂತು.ಆ ದಿನ ಪೂರ್ತಿ ಆ ನೋವು ನೆನಪು ಮಾಡಿಕೊಂಡ ಕಾರಣಕ್ಕೆ ಏನೋ ಸಣ್ಣದಾಗಿ ಎದೆ ನೋವು ಕಾಡುತ್ತಿತು. ಆ ಬಾಲೆಯ ಕನಸು ಕೊಂದ ಆ ಪಾಪಿಗಳ ಕೃತ್ಯ 
 ಮೈ ನಡುಗುವಂತಹದು.ಇಂತಹ  ಕೃತ್ಯಗಳು ಬೆಳಕಿಗೆ ಬಾರದಂತಹವುಗಳು ಬೇಕಾದಷ್ಟು ಇರಬಹುದು.ಹೆಣ್ಣು ನಯವಿನಯ ಕಲಿಯಬೇಕು ಎಂದು ಬಯಸುವ ಸಮಾಜ ಎಷ್ಟರಮಟ್ಟಿಗೆ ಗಂಡಿಗೆ ಹೆಣ್ಣುಮಕ್ಕಳಿಗೆ ಗೌರವ ರಕ್ಷಣೆ ಕೊಡಬೇಕು ಎಂದು ಕಲಿಸುವಲ್ಲಿ ಸೋಲುತ್ತಿದೆ ಎಂದು ಮನಗಾಣಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಯೋಚಿಸಬೇಕಾಗಿದೆ.ಅಂಕಪಟ್ಟಿಗಾಗಿ ಇರುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿದೆ
.ನಮ್ಮ ಮನೆಗಳಲ್ಲಿಯೇ ಗಂಡು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು.
ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಕಠಿಣವಾದಾಗ ಮಾತ್ರ ಈ ಸಮಾಜ ಎಚ್ಚೆತ್ತಕೊಳ್ಳಬಹುದು.ಗಂಡು ಮಕ್ಕಳು ಬೇಕು ಎಂದು ಹಂಬಲಪಡುವ ಪೋಷಕರು ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ 
ಜವಾಬ್ದಾರಿ ಕೂಡ ಇದೆ ಎಂಬುದನ್ನು ಮರೆಯಬಾರದು. 





     
_ ಕೂಡಕಂಡಿ ಪ್ರೀತು ರಾಜೀವ್.

Thursday, 15 August 2019

ಮಾತು ಕೊಟ್ಟಿರುವೆ.

ಹಕ್ಕಿಯೊಂದು ಹಾರಲು ಕರೆಯುತ್ತಿದೆ
ಕಪ್ಪೆಯೊಂದು ಕುಪ್ಪಳಿಸಲು ಕರೆಯುತ್ತಿದೆ
ಜೇನುಹುಳುವೊಂದು ಮಕರಂದ ಹೀರಲು ಕರೆಯುತ್ತಿದೆ
ಹೂವೊಂದು ಜೊತೆಗೂಡಿ ನಗಲು ಕರೆಯುತ್ತಿದೆ
ಮೀನೊಂದು ಈಜಲು ಕರೆಯುತ್ತಿದೆ
  ಎಲ್ಲರಿಗೂ ಮಾತು ಕೊಟ್ಟಿರುವೆ ಬರುವೆನೆಂದು
ಈ ಜಗದ  ಜಂಜಾಟದ ಎಲ್ಲೆ ಮೀರಿ 
ಆನಂದದಿಂದ ಹಾರಿ
ಒಮ್ಮೆ ಹೋಗಿ ಬರಬೇಕು
ಮಾತು ಕೊಟ್ಟಿರುವೆ..
ಕನಸಿನಲ್ಲಿಯಾದರೂ ಒಮ್ಮೆ ಹೋಗಿ ಬರಲೇ? 
ಮಾತು ಕೊಟ್ಟಿರುವೆನೆಲ್ಲಾ...
  

-    ಕೂಡಕಂಡಿ ಪ್ರೀತು ರಾಜೀವ್

Tuesday, 13 August 2019

ವೈಮಾನಿಕ ಸಮೀಕ್ಷೆ

ಚುನಾವಣೆ ಸಮಯದಲ್ಲಿ ಬೀದಿ ಬೀದಿಗಳಲ್ಲಿ ಕೈ
ಮುಗಿದು ನಡೆಯಲು ಶಕ್ತಿವಿರುವ ರಾಜಕಾರಣಿಗಳಿಗೆ ಇಂತಹ ಪ್ರವಾಹದ ಸಮಯದಲ್ಲಿ ಬರಲು ಶಕ್ತಿಯೂ ಇಲ್ಲ.ಮನಸ್ಸು ಇಲ್ಲ ಎಂದೆನಿಸುತ್ತದೆ.ವೈಮಾನಿಕ ಸಮೀಕ್ಷೆಯಲ್ಲಿ ನೊಂದವರ ಕಣ್ಣೀರು ಕಾಣಿಸುವುದಿಲ್ಲ.ಶೋಕತಪ್ತರ ಅಳು ಕೇಳಿಸುವುದಿಲ್ಲ.ಕೊಳೆತ ಹೆಣ,ಕೃಷಿ ಭೂಮಿಯ ವಾಸನೆಯೂ ಬರುವುದಿಲ್ಲ.ಹಾಯಾಗಿ ಕುಳಿತು ವರದಿ ನೀಡಿ ಹಣದಲ್ಲಿ ಎಲ್ಲವನ್ನು ಅಳೆಯುವ ನೀತಿ ನೋಡಿ ಖೇದವಾಗುತ್ತದೆ.
ನಾಡನ್ನು ನಡುಗಿಸಿದ ಪ್ರವಾಹದ ಭೀತಿಯಲ್ಲಿ ಸೊರಗಿದ ಜನರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ  ಸಿಕ್ಕುವ ನಂಬಿಕೆಯೂ ಇಲ್ಲ ಬಿಡಿ.ಎಲ್ಲವೂ ರಾಜಕೀಯ.ನಮಗೆ ನೆರವಾಗಲು 
ನಾವು ಬೇರವರಿಗೆ ನೆರವಾಗುವ ಗುಣವೊಂದೇ ನಮಗೆ ಸಹಾಯ ಮಾಡುವುದು.ಅರಮನೆಯಲ್ಲಿ ಇದ್ದರೂ ನೆರೆಮನೆ ಬೇಕೆಂಬ ಗಾದೆ ನಿಜಕ್ಕೂ ಸತ್ಯ.


      - ಕೂಡಕಂಡಿ ಪ್ರೀತು ರಾಜೀವ್.



Monday, 12 August 2019

ಪೆದ್ದಿ ನಾನು

ನಾನು ಬರೆಯಬೇಕು
ಪದಗಳನ್ನು ಹೆಕ್ಕಿ ತೆಗಿಯಬೇಕು
ಅಯ್ಯೋ!ಏನು ಬರೆಯಲಿ?

ಹೂವು  ಗಾಳಿ  ಹಕ್ಕಿ
ಬೆಟ್ಟ ಮಣ್ಣು........
ಅಯ್ಯೋ! ಬೇಡ. ಎಲ್ಲರೂ
ಬರೆದು ಪದಗಳೇ ಉಳಿದಿಲ್ಲ  ನನಗೆ

ಗಂಡ  ಮಗು ಅಜ್ಜಿ
ಮಾವ ಸಂಬಂಧಿಕರು.....
ಅಯ್ಯೋ! ಬೇಡ.ಅವರನ್ನು
ಪದಗಳಲ್ಲಿ ಹೆರಲು ಮನಸ್ಸಿಲ್ಲ ನನಗೆ

ಸಾವು  ಸುಖ ಮರಣ
ಆನಂದ ನೋವು........
ಅಯ್ಯೋ! ಬೇಡ .ಅವುಗಳನ್ನು
ಪದಗಳಲ್ಲಿ ಹೊರಲು ಶಕ್ತಿಯಿಲ್ಲ ನನಗೆ

ರಾಜಕೀಯ  ಸಮಾಜ  ಹೋರಾಟ
ಭ್ರಷ್ಟಾಚಾರ ಸಿನಿಮಾ.........
ಅಯ್ಯೋ!ಬೇಡ.ಅವುಗಳನ್ನು 
ಪದಗಳಲ್ಲಿ ಜೋಡಿಸುವ ಜ್ಞಾನವಿಲ್ಲ ನನಗೆ

ಪೆದ್ದಿ ನಾನು
ಬರೆಯಲು ಪದಗಳೇ ಸಿಗುತ್ತಿಲ್ಲ.
ಪೆದ್ದಿ ನಾನು.
                   -  ಕೂಡಕಂಡಿ  ಪ್ರೀತು ರಾಜೀವ್.







Monday, 5 August 2019

ಮನದಲ್ಲಿನ ನೂರಾರು ಮಾತುಗಳನ್ನು ಅಕ್ಷರ ರೂಪಕ್ಕೆ ತರುವ ಪ್ರಯತ್ನ ಈ ದಿನ ಮಾಡುವ ಭರದಲ್ಲಿ ನನ್ನ ಒಳಗಿನ  ಬರಹದ ಆಸೆ ಚಿಗುರಿದ ಕಾರ್ಯ ಕಂಡು ನಾನೆ ಬೆರಗಾದೆ.